ರಾಜಪುರೋಹಿತ, ನಾರಾಯಣ ಶ್ರೀನಿವಾಸ
1877-1953. ಪ್ರಸಿದ್ಧ ಕನ್ನಡ ವಿದ್ವಾಂಸರು. ಕರ್ನಾಟಕ ಸಾಂಸ್ಕøತಿಕ ಏಕೀಕರಣಕ್ಕಾಗಿ ಶ್ರಮಿಸಿದ ಮಹನೀಯರಲ್ಲೊಬ್ಬರು. ಧಾರವಾಡ ಜಿಲ್ಲೆಯ ಹಾವೇರಿ ತಾಲ್ಲೂಕಿನ ಅಗಡಿ ಇವರ ಜನ್ಮಸ್ಥಳ. ಅಗಡಿ ಹಿಂದೆ ಒಂದು ಸಂಸ್ಥಾನ ಆಗಿತ್ತು. ಸಂಸ್ಥಾನಿಕರಿಗೆ ಇವರ ಪೂರ್ವಜರು ಪುರೋಹಿತರಾಗಿದ್ದರಿಂದ, ಇವರಿಗೆ ರಾಜಪುರೋಹಿತ ಎಂಬ ಅಡ್ಡ ಹೆಸರು ಬಂತು. ಇವರ ವ್ಯಾಸಂಗ ಧಾರವಾಡದಲ್ಲಿ ನಡೆಯಿತು. ಮರಾಠಿಯ ಕೇಸರಿ ಪತ್ರಿಕೆಯಿಂದ ಪ್ರಭಾವಿತರಾಗಿ ರಾಷ್ಟ್ರೀಯವಾದಿಗಳಾದ ಇವರು, ಸುಮಾರು ಮೂರು ವರ್ಷಗಳ ಕಾಲ ಸರ್ಕಾರಿ ಶಾಲಾ ಉಪಧ್ಯಾಯರಾಗಿ ಕೆಲಸ ಮಾಡಿದರು. ಅನಂತರ ಆಲೂರು ವೆಂಕಟರಾಯರು ಧಾರವಾಡದಲ್ಲಿ ಸ್ಥಾಪಿಸಿದ್ದ ರಾಷ್ಟ್ರೀಯ ವಿದ್ಯಾಶಾಲೆಯಲ್ಲಿ ಶಿಕ್ಷಕರಾದರು. ಅಲ್ಲಿ ದ.ರಾ. ಬೇಂದ್ರೆಯವರು ಇವರ ಶಿಷ್ಯರಾಗಿದ್ದರು. ರಾಷ್ಟ್ರೀಯ ಶಾಲೆ ನಿಂತುಹೋದ ಮೇಲೆ, ಇವರೂ ಇವರ ಮಿತ್ರರೂ ಕೂಡಿ ಧಾರವಾಡದಲ್ಲಿ 1914ರಲ್ಲಿ ಕರ್ನಾಟಕ ಇತಿಹಾಸ ಸಂಶೋಧನಾ ಮಂಡಲವನ್ನು ಸ್ಥಾಪಿಸಿದರು. ಆ ಸಂಸ್ಥೆಗಾಗಿ ಶಾಸನ ನಾಣ್ಯ, ಮುಂತಾದ ಆಧಾರ ಸಾಮಗ್ರಿಗಳನ್ನು ಸಂಗ್ರಹಿಸಲು ರಾಜಪುರೋಹಿತರು ಕರ್ನಾಟಕ ಉದ್ದಗಲಕ್ಕೂ ಸಂಚರಿಸಿದರು.

ಸತತವಾದ ಅಭ್ಯಾಸವನ್ನು ಮತ್ತು ಚಿಕಿತ್ಸಕ ಬುದ್ಧಿಯಿಂದ ಗ್ರಹಿಸಿದ ವಿಷಯಗಳನ್ನು ಕುರಿತು ರಾಜಪುರೋಹಿತರು ಅನೇಕ ಸಂಶೋಧನ ಲೇಖನಗಳನ್ನು ಬರೆದರು. ಕೇಸರಿ ಪತ್ರಿಕೆಯಲ್ಲಿ ಕರ್ನಾಟಕ ಮಹಾರಾಷ್ಟ್ರ ಎಂಬ ಶೀರ್ಷಿಕೆಯಲ್ಲಿ ಅನೇಕ ಸಂಶೋಧನಾ ಲೇಖನಗಳನ್ನು ಪ್ರಕಟಿಸಿದರು ಕನ್ನಡ ಸಾಹಿತ್ಯ ಪರಿಷತ್ಪತ್ರಿಕೆ ಮತ್ತು ಕರ್ನಾಟಕ ಇತಿಹಾಸ ಸಂಶೋಧನಾ ಮಂಡಲದ ಪ್ರಾಚೀನ ಕರ್ನಾಟಕ ಪತ್ರಿಕೆಯಲ್ಲಿ ಇವರ ಸಂಶೋಧನಾ ಲೇಖನಗಳು ಪ್ರಕಟವಾದವು. ಅವುಗಳಲ್ಲಿ ಇವರು ನೃಪತುಂಗ, ರನ್ನ, ದುರ್ಗಸಿಂಹ, ಲಕ್ಷ್ಮೀಶ ಮುಂತಾದ ಕನ್ನಡ ಕವಿಗಳ ಕಾಲ, ದೇಶ ಮತಗಳನ್ನು ಕುರಿತು ಆಧಾರಪೂರ್ವಕವಾಗಿ ಚರ್ಚಿಸಿದ್ದಾರೆ. ದಾನಧರ್ಮ ಪದ್ಧತಿ (1910), ಸುರೇಶ್ವರಾಚಾರ್ಯರ ಚರಿತ್ರೆ (1922), ಮಧ್ವಾಚಾರ್ಯರ ಚರಿತ್ರೆ (1936), ಯಾಙ್ಞವಲ್ಯ್ಕರ ಚರಿತ್ರೆ (1936) ಮತ್ತು ಕರ್ನಾಟಕದ ಇತಿಹಾಸವೂ ವರ್ಣನೆಯೂ ಎಂಬ ಪ್ರೌಢ ಗ್ರಂಥಗಳನ್ನು ರಚಿಸಿದ್ದಾರೆ. ಕೊನೆಯ ಪುಸ್ತಕ ಮರಾಠಿ ಭಾಷೆಗೆ ಅನುವಾದಗೊಂಡಿದೆ. 

ರಾಜಪುರೋಹಿತರ ಸಾಹಿತ್ಯಸೇವೆಗೆ ವಿವಿಧ ಬಗೆಯ ಗೌರವಗಳು ಲಭಿಸಿವೆ. ಮುಂಬಯಿಯಲ್ಲಿ 1935 ಡಿಸೆಂಬರ್ 21ನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ಮೊದಲ ಬಾರಿಗೆ ವ್ಯವಸ್ಥೆಯಾಗಿದ್ದ ಸಂಶೋಧನಾ ಗೋಷ್ಠಿಗೆ ಇವರು ಅಧ್ಯಕ್ಷರಾದರು. ಬೆಂಗಳೂರಿನಲ್ಲಿ 1937ರಲ್ಲಿ ಬಿ.ಎಂ. ಶ್ರೀಕಂಠಯ್ಯನವರ ಅಧ್ಯಕ್ಷತೆಯಲ್ಲಿ ಇವರನ್ನು ಸನ್ಮಾನಿಸಲಾಯಿತು. ಧಾರವಾಡದಲ್ಲಿ 1947ರಲ್ಲಿ ಮುದವೀಡು ಕೃಷ್ಣರಾಯರ ಅಧ್ಯಕ್ಷತೆಯಲ್ಲಿ ಇವರ ಅರವತ್ತನೆಯ ಹುಟ್ಟುಹಬ್ಬವನ್ನು ಸಾರ್ವಜನಿಕವಾಗಿ ಆಚರಿಸಿ, ನಿಧಿ ಅರ್ಪಿಸಿ ಗೌರವಿಸಲಾಯಿತು.

ರಾಜಪುರೋಹಿತರು 23-8-1953ರಲ್ಲಿ ನಿಧನ ಹೊಂದಿದರು. 					
(ಜೆ.ಆರ್.ಪಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ